ಧಾರಕ
ಚಲಿಸುತ್ತಿರುವ ಒಂದು ಯಂತ್ರಭಾಗಕ್ಕೆ ಆಧಾರವಾಗಿರುವ ಮತ್ತೊಂದು ಯಂತ್ರಭಾಗ (ಬೇರಿಂಗ್). ಚಲಿಸುತ್ತಿರುವ ಯಂತ್ರಭಾಗಕ್ಕೆ ಧಾರಕ ಒಂದು ರೀತಿಯ ಚಲನೆಯಲ್ಲಿ ಮಾತ್ರ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ. ಸಾಮಾನ್ಯ ಹಾಗೂ ಸರ್ವಮಾನ್ಯವಾದ ಧಾರಕದ ಉದಾಹರಣೆ ಎಂದರೆ ಸುತ್ತುತ್ತಿರುವ ದಂಡದ (ಶ್ಯಾಫ್ಟ್) ಆಧಾರ. ಇಲ್ಲಿ ದಂಡ ತನ್ನ ಅಕ್ಷದ ಸುತ್ತ ಸುತ್ತಲು ಮಾತ್ರ ಅವಕಾಶವಿರುತ್ತದೆ. ಅಕ್ಷದ ಉದ್ದಕ್ಕೂ ಚಲಿಸಲು ಸಾಧ್ಯವಾಗುವುದಿಲ್ಲ. ಧಾರಕದ ಒಳಗಡೆ ಸುತ್ತುತ್ತಿರುವ ದಂಡದ ಭಾಗಕ್ಕೆ ಅಚ್ಚಿನ ಘರ್ಷಣಭಾಗ ಅಥವಾ ಜರ್ನಲ್ ಆವರ್ತಿಸುತ್ತಿರುತ್ತದೆ. ಕೆಲವೊಮ್ಮೆ ಎರಡೂ ಚಲಿಸುವುದುಂಟು. ಕೂಡುಸಲಾಕೆ (ಕನೆಕ್ಟಿಂಗ್ ರಾಡ್) ಮತ್ತು ವಕ್ರಸೂಜಿ (ಕ್ಯಾಂಕ್ ಪಿನ್) ಇವುಗಳ ಆಧಾರ ಇದಕ್ಕೊಂದು ಉದಾಹರಣೆ. ಧಾರಕ ಮತ್ತು ಜರ್ನಲ್ಲಿನ ಸಂಪರ್ಕ ಕ್ಷೇತ್ರಗಳು ಪರಸ್ಪರ ಚಲಿಸುವುದರಿಂದ ಘರ್ಷಣೆ ಉಂಟಾಗುತ್ತದೆ. ಇದರಿಂದ ಉಷ್ಣ ಉತ್ಪತ್ತಿ ಆಗುವುದಲ್ಲದೆ ಸಂಪರ್ಕ ಭಾಗಗಳು ಸವೆಯುತ್ತವೆ ಕೂಡ. ಹೆರೆಗಳ (ಲ್ಯೂಬ್ರಿಕೆಂಟ್ಸ) ಬಳಕೆಯಿಂದ ಈ ತೊಂದರೆಗಳನ್ನು ನಿವಾರಿಸಬಹುದು.
ಜಾರುಸಂಪರ್ಕದ ಧಾರಕಗಳು: ಜರ್ನಲ್ ಧಾರಕಗಳ ಪರಸ್ಪರ ಸಂಪರ್ಕದ ಆಧಾರದ ಮೇಲೆ ಧಾರಕಗಳನ್ನು ಜಾರು ಸಂಪರ್ಕದ ಧಾರಕಗಳು ಮತ್ತು ಉರುಳು ಸಂಪರ್ಕದ ಧಾರಕಗಳು ಎಂದು ವಿಂಗಡಿಸಬಹುದು. ಮೊದಲಿನವುಗಳ ಗುಂಪಿಗೆ ಸೇರುವ ಪ್ರಧಾನ ಧಾರಕಗಳೆಂದರೆ ಜರ್ನಲ್ ಧಾರಕ, ಪಾದಪೀಠ ಧಾರಕ ಮತ್ತು ನೂಕು ಧಾರಕ.

ಚಿತ್ರ-1

ಈ ಮೂರು ಧಾರಕಗಳನ್ನೂ ಚಿತ್ರ (1)ರಲ್ಲಿ ಕಾಣಿಸಿದೆ. ಜರ್ನಲ್ ಧಾರಕದಲ್ಲಿ ಆಧಾರವಾಗಿರುವ ಧಾರಕದ ಒತ್ತಡ ದಂಡದ ಅಕ್ಷಕ್ಕೆ 900 ಕೋನದಲ್ಲಿದ್ದು ದಂಡ ಧಾರಕದ ಮೂಲಕ ಹಾದು ಹೋಗುತ್ತದೆ. ಪಾದಪೀಠ ಧಾರಕದಲ್ಲಿ ಆಧಾರ ಒತ್ತಡ ದಂಡದ ಅಕ್ಷಕ್ಕೆ ಸಮಾಂತರವಾಗಿದ್ದು ದಂಡ ಧಾರಕದ ಒಳಗಡೆಯೇ ಕೊನೆಗೊಳ್ಳುತ್ತದೆ. ನೂಕು ಧಾರಕದಲ್ಲಿಯೂ ಆಧಾರ ಒತ್ತಡ ದಂಡದ ಅಕ್ಷಕ್ಕೆ ಸಮಾಂತರವಾಗಿರುವುದಾದರೂ ದಂಡ ತುದಿ ತಳ್ಳಿಕೆಗೆ ಒಳಪಟ್ಟು ಧರಕದ ಮೂಲಕ ಹಾದುಹೋಗುತ್ತದೆ.

ಜಾರು ಸಂಪರ್ಕದ ಧಾರಕಗಳಲ್ಲಿ ಸಂಪರ್ಕಕ್ಷೇತ್ರ ವಿಸ್ತಾರವಾದುದರಿಂದ ಘರ್ಷಣೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಹೆರೆಗಳ ಬಳಕೆ ಹೆಚ್ಚು. ಇದೊಂದು ಪ್ರಮುಖ ಅವಗುಣ. ಆದರೆ ಇವುಗಳ ನಿಯೋಜನೆ ಅಷ್ಟು ಸಂಕೀರ್ಣವಲ್ಲ. ವೆಚ್ವವೂ ಹೆಚ್ಚಲ್ಲ. ಹೆಚ್ಚು ವೇಗದಲ್ಲಿ ಸುತ್ತುವಾಗ ಸದ್ದು ಮಾಡುವುದಿಲ್ಲ. ಹೀಗಾಗಿ ಈ ಧಾರಕಗಳು ಸಾಕಷ್ಟು ಬಳಸಲ್ಪಡುತ್ತವೆ.

ಜತ್ರು ಧಾರಕ (ಕಾಲರ್ ಬ್ಯಾರಿಂಗ್): ಇದನ್ನು ಹೆಚ್ಚಾಗಿ ಅಧಿಕ ಅಕ್ಷಮುಖ ಹೊರೆಯನ್ನು ಹೊರುವ ಉಗಿ ತಿರುಬಾನಿ, ಅಪಕೇಂದ್ರ ಪಂಪು (ಸೆಂಟ್ರಿಫ್ಯೂಗಲ್ ಪಂಪ್), ಹಡಗಿನ ನೋದಕ (ಪ್ರೋಪೆಲರ್) ಇವೇ ಮುಂತಾದವುಗಳು ಸಮ ದಂಡಗಳಲ್ಲಿ ವಿಶೇಷವಾಗಿ ಬಳಸಲಾಗುವುದು. ನೋದಕದ ದಂಡದ ಧಾರಕವನ್ನು ಚಿತ್ರ (2) ರಲ್ಲಿ ಕಾಣಿಸಿದೆ. ಹೆಚ್ಚು ಜತ್ರುಗಳನ್ನು ಉಪಯೋಗಿಸಿದರೆ ನೂಕು ಸಮವಾಗಿ ಹರಡಲ್ಪಡುತ್ತವೆ.

ಚಿತ್ರ-2

ಧಾರಕ ಕ್ಷೇತ್ರ ದಂಡದ ಅಕ್ಷದಿಂದ ಸುಮಾರು ಸಮದೂರದಲ್ಲಿರುವುದರಿಂದ ಘರ್ಷಣೆಯ ವೇಗವೂ ಅದರಿಂದಾಗಿ ಸವಕಲೂ ಹೆಚ್ಚು ಕಡಿಮೆ ಒಂದೇ ರೀತಿಯದಾಗಿರುತ್ತದೆ. ಈ ಧಾರಕ ಜೋಡಿಸಲು ಅನುಕೂಲವಾಗಿರುವಂತೆ ಎರಡು ಭಾಗಗಳಲ್ಲಿ ಇರುವುದು ಅವಶ್ಯ.

ಗುಂಡಿನ ಧಾರಕ (ಬಾಲ್ ಬೇರಿಂಗ್) : ಉರುಳು ಸಂಪರ್ಕದ ಧಾರಕಗಳ ಗುಂಪಿಗೆ ಸೇರುವ ಧಾರಕಗಳೆಂದರೆ ಗುಂಡಿನ ಧಾರಕ. ಸುರುಳಿಯ ಧಾರಕ ಮತ್ತು ಸೂಜಿ ಧಾರಕ. ಇವು ಮೂರರಲ್ಲಿ ಜರ್ನಲ್ ಮತ್ತು ಧಾರಕದ ಆಧಾರ ಭಾಗ ಅನುಕ್ರಮವಾಗಿ ಗುಂಡು, ಸುರುಳಿ ಮತ್ತು ಸೂಜಿಗಳಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ. ಗುಂಡಿನ ಧಾರಕದಲ್ಲಿ (ಚಿತ್ರ3) ನಾಲ್ಕು ಭಾಗಗಳಿವೆ. ಗುಂಡು, ಗುಂಡಿನ ಒಳನೇಮಿ, ಗುಂಡಿನ ಹೊರನೇಮಿ ಮತ್ತು ಗುಂಡಿನ ಸೆರೆ.
ಗುಂಡುಗಳು : ಅಧಿಕ ಇಂಗಾಲಾಂಶದ ಕ್ರೋಮ್ ಉಕ್ಕಿನಿಂದ ಮಾಡಿದ ಗಟ್ಟಿ ಗುಂಡುಗಳನ್ನು ಉಜ್ಜಿ ಹೊಳೆಯುವಂತೆ ಮೆರುಗುಗೊಳಿಸಲಾಗಿರುತ್ತದೆ. ವ್ಯಾಸದಲ್ಲಿ 0.00002" ಗೂ ಹೆಚ್ಚು ವ್ಯತ್ಯಾಸವಿರದಂತೆ ಇವನ್ನು ತಯಾರಿಸಲಾಗುವುದು.
ಗುಂಡಿನ ನೇಮಿ : ಗುಂಡುಗಳನ್ನು ಅದೇ ಲೋಹದ ನೇಮಿಗಳೆಂಬ ಹೆಸರಿನ ಎರಡು ಉಂಗುರುಗಳು ಇಕ್ಕೆಲಗಳಲ್ಲಿ ಸುತ್ತುವರಿದಿರುವುವು. ಇವುಗಳಿಗಾಗಿ ಒಳನೇಮಿಯ ಹೊರಭಾಗದಲ್ಲೂ ಹೊರನೇಮಿಯ ಒಳಭಾಗದಲ್ಲೂ ಒಂದು ವೆಜ್ಜಪಥ ಉಂಟು. ಇದರ ತ್ರಿಜ್ಯ ಗುಂಡಿನ ತ್ರಿಜ್ಯಕ್ಕಿಂತ 5% - 10% ರಷ್ಟು ಹೆಚ್ಚು ಇರಬೇಕು. ಇದಕ್ಕಿಂತಲೂ ಹೆಚ್ಚು ವ್ಯತ್ಯಾಸವಿದ್ದರೆ ಧಾರಕದ ಹೊರೆ ಹೊರುವ ತ್ರಾಣ ವ್ಯತ್ಯಸ್ತವಾಗುತ್ತದೆ. ಎರಡು ತ್ರಿಜ್ಯಗಳೂ ಒಂದೇ ಆದರೆ ಗುಂಡು ಹಾಗೂ ನೇಮಿಯ ಮಧ್ಯೆ ಜಾರುಸಂಪರ್ಕ ಏರ್ಪಟ್ಟು ಘರ್ಷಣೆ ಹೆಚ್ಚುತ್ತದೆ.

ಗುಂಡಿನ ಸೆರೆ : ನೇಮಿಗಳ ಪಥದಲ್ಲಿ ಗುಂಡುಗಳು ಉರುಳುವಾಗ ಅಕ್ಕಪಕ್ಕದ ಗುಂಡುಗಳು ಪ್ರತ್ಯೇಕಿಸಲ್ಪಡದಿದ್ದರೆ, ಒಂದಕ್ಕೊಂದು ಹೊಂದಿಕೊಂಡು ಅವು ವಿರುದ್ಧ ದಿಶೆಗಳಲ್ಲಿ ಉರುಳುತ್ತವೆ. ಆದ್ದರಿಂದ ಗುಂಡುಗಳನ್ನು ಸೆರೆಗಳಲ್ಲಿ ಬಂಧಿಸುವುದು ಅವಶ್ಯ. ಸೆರೆಯನ್ನು ಸಾಮಾನ್ಯವಾಗಿ ಉಕ್ಕಿನ ಹಾಳೆಗಳಿಂದ ಮಾಡಿರುವರು. ಅದರಲ್ಲಿ ಎರಡು ಭಾಗಗಳಿದ್ದು ಗುಂಡುಗಳು ಕೂರಲು ಸ್ಥಳ ಇರುವುದು. ಧಾರಕವನ್ನು ಜೋಡಿಸುವಾಗ ಎರಡು ಭಾಗಗಳಿರುವ ಗುಂಡಿನ ಸೆರೆಯನ್ನು ರಿವೆಟ್ ಮಾಡಲಾಗುತ್ತದೆ. ಚಿತ್ರ ತೋರಿಸಿರುವ ರೀತಿಯ ಧಾರಕ ತ್ರಿಜ್ಯ ಮುಖ ಭಾರವನ್ನು ಮಾತ್ರ ಹೊರಬಲ್ಲದು. 

ಚಿತ್ರ-3

ಶುದ್ಧ ನೂಕುಗಳ ಸಂಯುಕ್ತ ಹೊರೆಯನ್ನು ಹೊರಲು ಕೋನೀಯ ಸಂಪರ್ಕದ ಧಾರಕ ಉಪಯೋಗಿಸಲ್ಪಡುತ್ತದೆ. ಈ ಧಾರಕದಲ್ಲಿ ಸಂಪರ್ಕ ಪ್ರದೇಶ ಒಂದು ಬಿಂದು ಮಾತ್ರ ಆಗಿರುವುದರಿಂದ ಘರ್ಷಣೆ ವಿರೋಧಿಧಾರಕವೆಂದು ಕರೆಯಲಾಗುತ್ತದೆ. ಇದರ ಇತರ ಗುಣಗಳೆಂದರೆ ದಂಡದ ಸಾಲು ನಿಲುವು ಬಹಳ ಕಾಲ ಕಾಪಾಡಲ್ಪಡುತ್ತದೆ. ಕೊಂಚ ಕಾಲ ಹೆಚ್ಚು ಹೊರೆಯನ್ನು ಹೊರಬಲ್ಲದು. ಹೆರೆಯ ಬಳಕೆ ಕಡಿಮೆ. ಸವೆದ ಧಾರಕಗಳ ಬದಲಾವಣೆ ಸುಲಭ. ಸರಿಯಾದ ಧಾರಕದ ಆಯ್ಕೆ ಸರಳ. ಅವಗುಣಗಳು ಇಲ್ಲದಿಲ್ಲ. ಮೊದಲ ವೆಚ್ಚ ಬಲು ಹೆಚ್ಚು. ನಿಯೋಜನೆ ಸಂಕೀರ್ಣ. ಧೂಳು ಮತ್ತು ಕೊಳೆಗಳ ಬಗ್ಗೆ ಅತಿ ಸೂಕ್ಷ್ಮ. ಯಾವ ಮುನ್ಸೂಚನೆಯೂ ಇಲ್ಲದೆ ತನ್ನ ಕಾರ್ಯದಲ್ಲಿ ವಿಫಲವಾಗುತ್ತದೆ. ಹೆಚ್ಚು ವೇಗದಲ್ಲಿ ಚಲಿಸಿದಾಗ ಸದ್ದು ಮಾಡುತ್ತದೆ. ದಂಡದ ಒಂದು ತುದಿಯಿಂದ ಮಾತ್ರ ಜೋಡಿಸಲು ಸಾಧ್ಯ. ಧಕ್ಕೆ ಹೊರೆಯನ್ನು (ಶಾಕ್ ಲೋಡ್ಸ್) ಹೊರಲು ಅಷ್ಟು ಸಾಮಥ್ರ್ಯಯುತವಲ್ಲ. ಸವೆದ ಭಾಗಗಳನ್ನು ಸರಿಪಡಿಸಲು ಯಾವ ಸೌಲಭ್ಯವೂ ಇಲ್ಲ. ಈ ಅವಗುಣಗಳಿದ್ದರೂ ಈ ಧಾರಕ ಮಾರುಕಟ್ಟೆಯಲ್ಲಿ ಅತಿ ಜನಪ್ರಿಯವಾಗಿದೆ. ಅನೇಕ ಗಾತ್ರಗಳಲ್ಲಿ ವಿವಿಧ ರೀತಿಯ ಹೊರೆಗಳನ್ನು ಹೊರುವಂತೆ ನಿಶ್ಚಲ ಅಳತೆಯಲ್ಲಿ ಸಿಗುವಂತೆ ಇದನ್ನು ತಯಾರಿಸಲಾಗಿದೆ. ಧಾರಕದ ಗಾತ್ರ, ಭಾರ, ವೇಗ, ಬಾಳಿಕೆಯ ಅವಧಿ- ಇವುಗಳ ಪರಸ್ಪರ ಸಂಬಂಧದ ಬಗ್ಗೆ ಅನೇಕ ಸಂಶೋಧನೆಗಳು ನಡೆದು ಅವುಗಳ ಫಲಿತಾಂಶಗಳು ಪ್ರಕಟಗೊಂಡಿವೆ. ಅವುಗಳ ಸಹಾಯವನ್ನು ಪಡೆದರೆ, ಯಾವ ರೀತಿಯ ಹೊರೆಯನ್ನಾದರೂ ಹೊರುವ ಎಷ್ಟು ಕಾಲವಾದರೂ ಬಾಳಿಕೆ ಬರುವ ಧಾರಕವನ್ನು ಸುಲಭವಾಗಿ ಆಯ್ಕೆ ಮಾಡಬಹುದು.
ಉರುಳೆ ಧಾರಕ : ಗುಂಡಿನ ಧಾರಕ ಮತ್ತು ಉರುಳೆ ಧಾರಕದ ರಚನೆಯಲ್ಲಿ ಸ್ವಲ್ಪ ವ್ಯತ್ಯಾಸವಿರುವುದಾದರೂ ಅವುಗಳ ಕಾರ್ಯವಿಧಾನ ಏಕರೀತಿಯದು. ಆದ್ದರಿಂದ ಗುಂಡಿನ ಧಾರಕದ ಗುಣಾವಗುಣಗಳು ಉರುಳೆ ಧಾರಕಕ್ಕೂ ಅನ್ವಯಿಸುತ್ತವೆ. ರಚನೆಯಲ್ಲಿನ ಒಂದು ಪ್ರಮುಖ ವ್ಯತ್ಯಾಸವೆಂದರೆ ಒಳನೇಮಿ ಹಾಗೂ ಹೊರನೇಮಿಗಳ ನಡುವೆ ಗುಂಡಿನ ಬದಲು ಉರುಳೆ ಇರುವುದು. ಸಂಪರ್ಕ ಪ್ರದೇಶ ಒಂದು ರೇಖೆ ಆಗುವುದರಿಂದ ಘರ್ಷಣೆ ಗುಂಡಿನ ಧಾರಕದಕ್ಕಿಂತಲೂ ಕೊಂಚ ಜಾಸ್ತಿ. ಆದರೆ ಗುಂಡಿನ ಧಾರಕಕ್ಕಿಂತಲೂ ಹೆಚ್ಚು ಹೊರೆಯನ್ನು ಇದು ಹೊರಬಲ್ಲದು. ಉರುಳೆಯ ಸೆರೆಯ ರಚನೆಯೂ ಕೊಂಚ ಭಿನ್ನ. ಉಂಗುರವೊಂದರ ಸುತ್ತಲೂ ಚಿತ್ರ (4) ರಲ್ಲಿ ತೋರಿಸಿರುವಂತೆ ಇರುವ ಸ್ಥಳಗಳಲ್ಲಿ ಅಥವಾ ಎರಡು ಬಳೆಗಳ ಮಧ್ಯೆ ತುದಿಗಳು ಒಂದು ಚೌಕಟ್ಟಿನಲ್ಲಿದ್ದು ಉರುಳೆ ಬಂಧಿಸಲ್ಪಡಬಹುದು. ಇವುಗಳಲ್ಲಿ ಅನುಕ್ರಮವಾಗಿ ಘನ ಸೆರೆ (ಸಾಲಿಡ್ ಕೇಜ್) ಮತ್ತು ಬಳೆ ಸೆರೆ (ರಿಂಗ್ ಸೆರೆ) ಎಂದು ಹೆಸರುಂಟು. ಚಿತ್ರ (4) ರಲ್ಲಿ ತೋರಿಸಿರುವ ರೀತಿಯ ಉರುಳೆ ಧಾರಕ ನೂಕುಹೊರೆಯನ್ನು ಹೊರಲಾರದು. 

ಚಿತ್ರ-4

 ಕೋನಿಯ ಸಂಪರ್ಕದ ಧಾರಕ ಈ ಹೊರೆಯನ್ನು ಹೊರಲು ಶಕ್ತವಾದ್ದರಿಂದ ಅದು ಉಗಿಬಂಡಿ, ಸ್ವಯಂಚಾಲಿತಗಳೇ ಮುಂತಾದವುಗಳಲ್ಲಿ ಉಪಯೋಗಿಸಲ್ಪಡುತ್ತದೆ.

ಸೂಜಿಧಾರಕ : ಗುಂಡಿನ ಧಾರಕ ಮತ್ತು ಸೂಜಿ ಧಾರಕಗಳ ರಚನೆಯಲ್ಲಿ ಸ್ವಲ್ಪ ವ್ಯತ್ಯಾಸ ಇರುವುದಾದರೂ ಕಾರ್ಯ ವಿಧಾನ ಏಕರೀತಿಯದು. ಆದ್ದರಿಂದ ಗುಂಡಿನ ಧಾರಕಗಳ ಗುಣಾವಗುಣಗಳು ಸೂಜಿಧಾರಕಗಳಿಗೂ ಅನ್ವಯಿಸುತ್ತವೆ. ರಚನೆಯಲ್ಲಿ ವ್ಯತ್ಯಾಸವೆಂದರೆ ಈ ಧಾರಕದಲ್ಲಿ ಒಳನೇಮಿ ಹಾಗೂ ಸೆರೆಗಳು ಇರುವುದಿಲ್ಲ. ಸೂಜಿಗಳು ಧಾರಕದ ಮೇಲೆಯೇ ಕುಳಿತುಕೊಳ್ಳುತ್ತವೆ. (ಚಿತ್ರ 5) ಸಂಪರ್ಕ ಕ್ಷೇತ್ರ ವಿಸ್ತಾರವಾಗಿರುವುದರಿಂದ ಘರ್ಷಣೆ ಹೆಚ್ಚುವುದಾದರೂ ಅಧಿಕ ತ್ರಿಜ್ಯ ಮುಖ ಭಾರವನ್ನು ಹೊರಲು ಶಕ್ತವಾಗಿರುತ್ತದೆ. ಸ್ಥಳ ಪರಿಮಿತಿಗೊಂಡಿರುವಾಗ ಬೇರೆಯ ಧಾರಕಗಳಿಗಿಂತಲೂ ಇವುಗಳ ಆಯ್ಕೆ ಸೂಕ್ತವಾದುದು. ಕವಾಟದ ರಾಕರ್ ಆರಮ್, ಕ್ಯಾಮ್ ರೋಲರ್ ಇವೇ ಮುಂತಾದವು ಉಪಯೋಗಿಸಲ್ಪಡುತ್ತದೆ.

ಚಿತ್ರ-5

ಲೋಹಕೋಶ ಧಾರಕ : ಲೋಹಕೋಶ ಧಾರಕದಲ್ಲಿ ಎರಕ ಹೊಯ್ದ ಲೋಹಕೋಶ ಉಂಟು. ಅದರ ಮಧ್ಯದಲ್ಲಿ ಎರಡು ಭಾಗಗಳಲ್ಲಿರುವ ಬ್ಯಾಬಿಟ್ ಲೋಹದ ಕವಚಗಳನ್ನಿಟ್ಟು (ಬುಷ್) ಅವುಗಳ ಮೇಲೆ ಒಂದು ಎರಕ ಹೊಯ್ದ ಟೊಪ್ಪಿಗೆಯನ್ನು ಮಡಗಿ ಬಿಗಿಯಾಗುವಂತೆ ಬೋಲ್ಟುಗಳಿಂದ ಬಂಧಿಸಲಾಗುವುದು. ಧಾರಕ ಎರಡು ಭಾಗಗಳಲ್ಲಿ ಇರುವುದರಿಂದ ದಂಡವನ್ನು ಒಂದು ತುದಿಯಿಂದ ಸೇರಿಸಬೇಕಾಗುವುದಿಲ್ಲ ; ದಂಡದ ಯಾವ ಭಾಗದಲ್ಲಿಯಾದರೂ ಜೋಡಿಸಬಹುದು. ಕವಚ ದಂಡದೊಂದಿಗೆ ಸುತ್ತಲು ಸಾಧ್ಯವಾಗುವಂತೆ ಕವಚದ ಕೆಳಭಾಗದಲ್ಲಿರುವ ಚಾಚುಭಾಗ ಪಾದಪೀಠದ ರಂಧ್ರದಲ್ಲಿ ಕುಳಿತುಕೊಳ್ಳುವಂತೆ ಮಾಡಿರುತ್ತದೆ. ಕವಚ ಅಕ್ಷದ ಉದ್ದಕ್ಕೂ ಚಲಿಸಿ ಧಾರಕದ ಹೊರಗಡೆ ಹೋಗದಂತೆ ಪಕ್ಕದಲ್ಲಿರುವ ವಿಸ್ತರಿತ ಅಂಚು (ಫ್ಲ್ಯಾಂಜ್) ತಡೆ ಹಿಡಿಯುತ್ತದೆ. ಧಾರಕದ ಮೇಲೆ ಹಾಕಿದರೆ ಹೆರೆ ಜರ್ನಲನ್ನು ಸೇರಲು ಟೊಪ್ಪಿಗೆ ಮತ್ತು ಕವಚಗಳಲ್ಲಿ ರಂಧ್ರ ಮಾರ್ಗವಿರುವುದನ್ನು ಚಿತ್ರ (6)ರಲ್ಲಿ ಕಾಣಬಹುದು. ಈ ಧಾರಕವನ್ನು ಮಟ್ಟ ದಂಡಗಳಿಗೆ ಮಾತ್ರ ಉಪಯೋಗಿಸಲಾಗುತ್ತದೆ. ಧಾರಕವನ್ನು ಬಂಧಿಸಲು ಅನುಕೂಲವಾಗುವಂತೆ ಪಾದಪೀಠ ಕೆಳಭಾಗವನ್ನು ವಿಸ್ತರಿಸಲಾಗಿದೆ. ಬ್ರ್ಯಾಕೆಟ್‍ಗಳ ಸಹಾಯದಿಂದ ಗೋಡೆ, ಮಾಳಿಗೆ, ನೆಲ ಹಾಗೂ ಯಂತ್ರಭಾಗಗಳಿಗೆ ಇದನ್ನು ಬಂಧಿಸಬಹುದು.

ಚಿತ್ರ-6

ಬಹುಕಾಪಿನ ಧಾರಕ (ಮಲ್ಟಿಪ್ಯಾಡ್ ಬೇರಿಂಗ್) : ಸಾಲು ನಿಲುವನ್ನು ಕಾಪಾಡಲು ಕಷ್ಟವಾಗುವ ಬೃಹತ್ ಪ್ರಮಾಣದ ಧಾರಕಗಳಲ್ಲಿ ಇದನ್ನು ಉಪಯೋಗಿಸಲಾಗುವುದು. ಜರ್ನಲ್ ಮತ್ತು ಧಾರಕಗಳ ನಡುವೆ ಬೆಸ ಸಂಖ್ಯೆಯ ಕಾಪುಗಳು ಈ ಕಾರ್ಯವನ್ನು ನಿರ್ವಹಿಸುತ್ತವೆ. ಕಾಪಿನ ಕೆಳಭಾಗ ಡೊಂಕಾಗಿದ್ದು ಧಾರಕದಲ್ಲಿರುವ ಅದಕ್ಕೆ ಪೀಠದಲ್ಲಿ ಕುಳಿತು ಚಲಿಸುವುದು. ಹೆರೆಯ ಬಳಕೆಗೆ ಇರುವ ಅನುಕೂಲತೆಯನ್ನು ಚಿತ್ರ (7) ರಲ್ಲಿ ನೋಡಬಹುದು.

ಚಿತ್ರ-7

ತೈಲ ಬಳೆಗಳ ಧಾರಕ : ಹೆರೆಗಳನ್ನು ಬಳಸಲು ಅನೇಕ ವಿಧಾನಗಳಿವೆ. ತೈಲ ಬಳೆಗಳನ್ನು ಉಪಯೋಗಿಸಿ ಹೆರೆಗಳನ್ನು ಬಳಸುವುದು ಒಂದು ವಿಧಾನ. ಹೆರೆ ತೈಲವಾಗಿದ್ದರೆ ಮಾತ್ರ ಇದನ್ನು ಉಪಯೋಗಿಸಲಾಗುವುದು. ದಂಡದ ಮೇಲೆ ತೂಗುತ್ತಿರುವ ಬಳೆಯ ಕೆಳಭಾಗ ತೈಲಾಶಯದಲ್ಲಿ ಮುಳುಗಿರುತ್ತದೆ. (ಚಿತ್ರ 8). ಈ ಬಳೆಗಳೂ ದಂಡದೊಂದಿಗೆ ಅದರೆ ಕಡಿಮೆ ವೇಗದಲ್ಲಿ ಸುತ್ತುತ್ತಿರುತ್ತದೆ. ಬಳೆ ಮೇಲಕ್ಕೆ ಹೋಗುವಾಗ ಹೆಚ್ಚು ತೈಲವನ್ನು ಕೊಂಡೊಯ್ದು ಕೆಳಕ್ಕೆ ಬರುವಾಗ ತೈಲವನ್ನು ತರುತ್ತದೆ. ಉಳಿದ ತೈಲ ಅಚ್ಚಿನ ಮೇಲೆ ಹರಿದು ಪುನಃ ತೈಲಾಶಯಕ್ಕೆ ಬರುತ್ತದೆ. ಇದರಿಂದ ಪರಿಚಲನೆ ಒಂದೇ ರೀತಿಯಲ್ಲಿರುವುದು. 

ಚಿತ್ರ-8

ದಂಡ ಸುತ್ತುವಾಗ ಮಾತ್ರ ತೈಲದ ಬಳಕೆ ಆಗುವುದರಿಂದ ಈ ವಿಧಾನ ಬಲು ಮಿತವ್ಯಯಕಾರಿ. ತೈಲ ಧಾರಕದ ಹೊರಹೋಗದಂತೆ, ದೂಳು ಮುಂತಾದುವು ಒಳಬರದಂತೆ ತೈಲ ಮೊಹರುಗಳನ್ನು ಉಪಯೋಗಿಸುವುದು ಅವಶ್ಯ.
ಧಾರಕ ವಸ್ತುಗಳು : ಧಾರಕ ವಸ್ತುಗಳಾಗಿ ಅನೇಕ ಲೋಹ ಅಲೋಹಗಳನ್ನು ಉಪಯೋಗಿಸಲಾಗುವುದು. ಪ್ರಮುಖವಾದವುಗಳ ರಚನೆ ಹಾಗೂ ಬಳಕೆಯ ಬಗ್ಗೆ ವಿವರಗಳನ್ನು ಇಲ್ಲಿ ಬರೆದಿದೆ. ಸಾಮಾನ್ಯವಾಗಿ ಉಪಯೋಗಿಸುವ ಧಾರಕ ವಸ್ತುವೆಂದರೆ ಬ್ಯಾಬಿಟ್ ಲೋಹ. ಇದರಲ್ಲಿ 90% ತವರ, 5% ಆಂಟಿಮೊನಿ, 1% ತಾಮ್ರ ಮತ್ತು 4% ಇತರ ಲೋಹಗಳು ಇವೆ. ಕೆಲವೊಮ್ಮೆ ತವರದ ಬದಲು ಸೀಸ ಪ್ರಮುಖ ಭಾಗವಾಗಿರುವುದು. ಬೇರೆಲೋಹಗಳ ಪ್ರಮಾಣವೂ ಬದಲಿಸಲ್ಪಟ್ಟು ಅನೇಕ ದರ್ಜೆಯ ಬ್ಯಾಬಿಟ್‍ಗಳನ್ನು ತಯಾರಿಸುವರು. ಧಾರಕದ ಒತ್ತಡದ 6.45 ಚದರ ಸೆಂ.ಮೀ.ಗೆ 450 ಕೆ.ಜಿ. ಗಳಿಗಿಂತಲೂ ಕಡಿಮೆ ಇದ್ದಾಗ ಮಾತ್ರ ಈ ಲೋಹವನ್ನು ಬಳಸಲಾಗುತ್ತದೆ. ಇದರ ಒಂದು ಉಪಯೋಗವೆಂದರೆ ಹೆರೆಯ ಬಳಕೆ ನಿಂತಾಗ ಇದು ಸುಲಭವಾಗಿ ಕರಗಿಹೋಗುತ್ತದೆ. ಜರ್ನಲ್ಲಿನ ಭಾಗ ಹಾಳಾಗುವುದಿಲ್ಲ. ಧಾರಕದ ಒತ್ತಡ 6.45 ಚದರ ಸೆಂ.ಮೀ.ಗೆ 450 ಕೆ.ಜಿ.ಗಳಿಗಿಂತ ಹೆಚ್ಚಿದ್ದರೆ ಕಂಚನ್ನು ಉಪಯೋಗಿಸಲಾಗುವುದು. ಕಂಚಿನಲ್ಲಿ ತವರ ಪ್ರಮುಖ ಭಾಗವಾಗಿದ್ದರೆ ಅದು ಹೆಚ್ಚು ಭಾರವನ್ನು ಹೊರಬಲ್ಲದು; ಸವಕಲನ್ನು ತಡೆಯಬಲ್ಲದು; ಶಾಖವನ್ನು ಕಡಿಮೆ ಮಾಡಬಲ್ಲದು. ಸೀಸ ಪ್ರಮುಖಭಾಗವಾಗಿದ್ದರೆ ಹೆಚ್ಚು ಭಾರವನ್ನು ಹೊರಲಾರದು. ಆದರೆ ಸೀಸ ಮೃದುವಾಗಿದ್ದರಿಂದ ಜರ್ನಲ್ಲಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಹೆಚ್ಚು ವೇಗದಲ್ಲಿ ತಿರುಗುತ್ತ ಕಡಿಮೆ ಒತ್ತಡಕ್ಕೆ ಒಳಪಟ್ಟಿರುವ ಧಾರಕ್ಕೆ ಇವುಗಳ ಬಳಕೆ ಸೂಕ್ತ. ಲೋಹದ ಹಿನ್ನಲೆಯನ್ನು ಹೊಂದಿರುವ ರಬ್ಬರಿನ ಧಾರಕವೂ ಬಳಕೆಯಲ್ಲಿವೆ. ಇವನ್ನು ಪಂಪು ಧಾರಕ. ಹಡಗಿನ ನೋದಕದ ದಂಡದ ಧಾರಕ ಇವೇ ಮುಂತಾದವುಗಳಿಗೆ ಉಪಯೋಗಿಸಲಾಗುವುದು. ಕಾರಣ, ಇಲ್ಲಿ ನೀರಿರುವುದರಿಂದ ತೈಲವನ್ನು ಹೆರೆಯನ್ನಾಗಿ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಈ ಧಾರಕದಲ್ಲಿ ನೀರನ್ನೇ ಹೆರೆಯನ್ನಾಗಿ ಬಳಸಬೇಕಾಗುತ್ತದೆ. ಕ್ಯಾಡ್ಮಿಯಮ್-ನಿಕ್ಕಲ್-ತಾಮ್ರ ಮತ್ತು ಕ್ಯಾಡ್ಮಿಯಮ್-ಬೆಳ್ಳಿ-ತಾಮ್ರ-ಇವುಗಳ ಸಂಯುಕ್ತ ಲೋಹಗಳಲ್ಲದೆ ಬೆಳ್ಳಿ, ತಾಂಡವಾಳ ಲೋಹಗಳನ್ನು ಕೂಡ ಧಾರಕವಸ್ತುಗಳಾಗಿ ಉಪಯೋಗಿಸಲಾಗುವುದು.

ಧಾರಕದ ಕವಚಗಳು (ಬ್ರಾಸಸ್) : ಜರ್ನಲ್ ಮತ್ತು ಧಾರಕಗಳ ಘರ್ಷಣೆಯ ಪರಿಣಾಮವಾಗಿ ರಂಧ್ರ ಸವೆಯುವುದುಂಟು. ಅದೇ ಜರ್ನಲ್ಲಿಗೆ ರಂಧ್ರ ಅಳ್ಳಕವಾಗುವುದರಿಂದ ಧಾರಕವನ್ನೇ ಬದಲಿಸಬೇಕಾಗುತ್ತದೆ. ಆಗ ವೆಚ್ಚ ಹೆಚ್ಚುತ್ತದೆ. 

ಚಿತ್ರ-9

ಧಾರಕದ ರಂಧ್ರಕ್ಕೆ ಬ್ಯಾಬಿಟ್ ಲೋಹ ಅಥವಾ ಬಂದೂಕ ಲೋಹದ ಒಂದು ಬಿಳಿ ಕವಚವನ್ನು ತೊಡಿಸಿದರೆ ಸವೆದಾಗ ಆ ಕವಚವನ್ನು ಮಾತ್ರ ಬದಲಿಸಬಹುದು. ಜೋಡಣೆಗೆ ಕಷ್ಟವಲ್ಲ. ವೆಚ್ಚವೂ ಹೆಚ್ಚಲ್ಲ. ಧಾರಕದೊಂದಿಗೆ ಕವಚವೂ ಸುತ್ತದಂತೆ ತಡೆಯುವುದು ಅವಶ್ಯ. ಅದು ಸುತ್ತದಂತೆ ತಡೆಯಲು ಇರುವ ವಿಧಾನಗಳನ್ನು ಚಿತ್ರ (9)ರಲ್ಲಿ ತೋರಿಸಿದೆ :
(ಚಿ) ಚಿತ್ರದಲ್ಲಿ ಧಾರಕದ ರಂಧ್ರಕ್ಕೆ ಅಷ್ಟಭುಜಾಕೃತಿ ಉಂಟು. ಕವಚದ ಹೊರಭಾಗವೂ ಅದೇ ಆಕೃತಿಯನ್ನು ಪಡೆದಿದೆ.
(b) ಚಿತ್ರದಲ್ಲಿ ಧಾರಕದ ರಂಧ್ರದ ಕೆಳಭಾಗದಲ್ಲಿ ಒಂದು ರಂಧ್ರ ಉಂಟು. ಕವಚದಲ್ಲಿರುವ ಚಾಚು ಭಾಗ ಅದರಲ್ಲಿ ಕುಳಿತುಕೊಳ್ಳುತ್ತದೆ.

   (ಛಿ) ಚಿತ್ರದಲ್ಲಿ ಧಾರಕದ ರಂಧ್ರದ ಒಂದು ಪಕ್ಕದಲ್ಲಿ ಲೋಹವನ್ನು ಕೊಂಚ ತೆಗೆಯಲಾಗಿದೆ. ಕವಚದಲ್ಲಿರುವ ಚಾಚು ಭಾಗ ಅದರಲ್ಲಿ ಹೊಂದಿಕೊಳ್ಳುತ್ತದೆ.

ಚಿತ್ರದಲ್ಲಿ ಧಾರಕ ರಂಧ್ರ, ಅಚ್ಚು ಎರಡು ಚಚ್ಚೌಕವಾಗಿವೆ.

ಚಿತ್ರ-10

ಧಾರಕವನ್ನು ತಂಪಾಗಿಸುವಿಕೆ: ಧಾರಕ ಮತ್ತು ಅಚ್ಚಿನ ಸಂಪರ್ಕ ಪ್ರದೇಶಗಳು ಪರಸ್ಪರ ಚಲಿಸುವುದರಿಂದ ಘರ್ಷಣೆ ಉಂಟಾಗುವುದು ಸರಿಯಷ್ಟೆ. ಆ ಘರ್ಷಣೆಯಿಂದ ಶಾಖೋತ್ಪತ್ತಿ ಆಗುತ್ತದೆ. ಸಣ್ಣ ಗಾತ್ರದ ಧಾರಕಗಳಲ್ಲಿ ಇದು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಹೆರೆಯೇ ಆ ಶಾಖವನ್ನು ಕೊಂಡೊಯ್ದು ಧಾರಕವನ್ನು ತಂಪಾಗಿರಿಸುತ್ತದೆ. ಅದರ ಬೃಹತ್ ಗಾತ್ರದ ಧಾರಕಗಳಲ್ಲಿ ಶಾಖ ಅಧಿಕ ಪ್ರಮಾಣದಲ್ಲಿರುವುದರಿಂದ ಹೆರೆಯೊಂದು ತಂಪಿಸುವ ಕೆಲಸವನ್ನು ನಿಭಾಯಿಸಲಾರದು. ನೀರನ್ನಾಗಲಿ ಪಂಖದಿಂದ ಬರುವ ಗಾಳಿಯನ್ನಾಗಲಿ ಧಾರಕ ಕವಚದ ಸುತ್ತಲು ಪರಿಚಲಿಸುವಂತೆ ಮಾಡಿ ಧಾರಕವನ್ನು ತಂಪಾಗಿರಿಸಬಹುದು.(ಚಿತ್ರ 10)
(ನೋಡಿ- ಅಚ್ಚಿನಧಾರಕ)
(ಎಚ್.ಪಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ